ಓ೦ ಶ್ರೀಗುರು ಬಸವಲಿಂಗಾಯ ನಮಃ
"ಐದು ರತ್ನದ ಮೇಲೆ ಒಂದು ಮಾಣಿಕ್ಯವ ಕಂಡೆನಯ್ಯ. ಆ ಮಾಣಿಕ್ಯವ ಒಂದು ಕೋಗಿಲೆ ನುಂಗಿ ಕೂಗುತಿದೆ ನೋಡಾ. ಆ ಕೋಗಿಲೆಯ ಒಬ್ಬ ಬೇಂಟೆಕಾರ ಕಂಡು ತಟ್ಟನೆ ಎಚ್ಚಿ ನಿರ್ವಯಲಾದ ವಿಚಿತ್ರವ ನೋಡಾ ಝೇಂಕಾರ ನಿಜಲಿಂಗ ಪ್ರಭುವೆ."
ಭಾವರ್ಥ=
ಶಿವಶರಣರಾದ ಜಕ್ಕಣಯ್ಯ ನಿರಾಳ ಮಂತ್ರಗೋಪ್ಯ ಈ ವಚನದಲ್ಲಿ ಮುಖ್ಯವಾಗಿ ಕಾಣುವಂಥದ್ದು ಸಾಕಾರದಿಂದ ನಿರಾಕಾರದಡೆಗೆ ಯಾವ ರೀತಿ ನಡೆದು ಹೋದೆ ಎಂಬ ತಮ್ಮ ಈ ವಿಚಿತ್ರ ಅನುಭವವನ್ನ ತುಂಬ ಗೋಪ್ಯವಾಗಿ ಬೆಡಗಿನ ರೀತಿಯಲ್ಲಿ ನುಡಿದಿದ್ದಾರೆ.
"ಐದು ರತ್ನದ ಮೇಲೆ ಒಂದು ಮಾಣಿಕ್ಯವ ಕಂಡೆನಯ್ಯ."
ಈ ವಚನದ ಮೊದಲ ಸಾಲಿನಲ್ಲಿ ಅತ್ಯಂತ ಸೂಕ್ಷ್ಮ ಸಂವೇದನೆಯೊಂದಿಗೆ ತಮ್ಮ ಅನುಭವವನ್ನ ವ್ಯಕ್ತಪಡಿಸಿದ್ದಾರೆ. ಇಲ್ಲಿ ಐದು ರತ್ನವೆಂದರೆ ಪಂಚೇಂದ್ರಿಯಗಳೆಂದು ಅರ್ಥೈಸಿಕೊಳ್ಳಬೇಕಾಗುತ್ತದೆ. ಒಂದು ಮಾಣಿಕ್ಯವೆಂದರೆ ಮನಸ್ಸು ಎಂಬ ಅರ್ಥ ಸೂಚಿಸುತ್ತದೆ. ಆ ಮನಸ್ಸನ್ನೆ ಮಾಣಿಕ್ಯದಂತೆ ಕಂಡಿದ್ದಾರೆ ಜಕ್ಕಣಯ್ಯ ಶರಣರು.
"ಆ ಮಾಣಿಕ್ಯವ ಒಂದು ಕೋಗಿಲೆ ನುಂಗಿ ಕೂಗುತಿದೆ ನೋಡಾ"
ಈ ಪಂಚೇಂದ್ರಿಯಗಳ ಚಟುವಟಿಕೆಗೆ ಮನವೆ ಮೂಲಕಾರಣವಾಗಿದೆ ಎಂದು ಅರಿತಿದ್ದ ಜಕ್ಕಣಯ್ಯ ಶರಣರು ಆ ಮನವೆಂಬ ಮಾಣಿಕ್ಯವನ್ನ ಲಿಂಗವೆಂಬ ಕೋಗಿಲೆಯಲ್ಲಿ ಐಕ್ಯಗೊಳಿಸಿ ಅಂದರೆ ಕೋಗಿಲೆಗೆ ನುಂಗಿಸಿ ಶಿವಶಿವ ಎಂದು ಕೂಗುವಂತೆ ಮಾಡಿದೆನು ನೋಡಿರಯ್ಯಾ ಎಂದು ಹೇಳುತ್ತಿದ್ದಾರೆ.
"ಆ ಕೋಗಿಲೆಯ ಒಬ್ಬ ಬೇಂಟೆಗಾರ ಕಂಡು ತಟ್ಟನೆ ಎಚ್ಚಿ ನಿರ್ವಯಲಾದ ವಿಚಿತ್ರವ ನೋಡಾ ಝೇಂಕಾರ ನಿಜಲಿಂಗಪ್ರಭುವೆ."
ಶಿವಶಿವ ಎಂದು ಜಪಿಸುತ್ತಿರುವ ಮನವನ್ನ ಒಬ್ಬ ಬೇಟೆಗಾರ ನೋಡಿ ತಕ್ಷಣವೆ ಕತ್ತರಸಿ ಬಯಲಾದ ಆಶ್ಚರ್ಯವ ಕಾಣಿರಯ್ಯ ಎಂದು ತಮ್ಮ ಪ್ರಿಯದೇವರಾದ ಝೇಂಕಾರ ನಿಜಲಿಂಗಪ್ರಭುವಿಗೆ ಹೇಳಿಕೊಂಡಿದ್ದಾರೆ. ಲಿಂಗವೆಂಬ ಕೋಗಿಲೆಯನ ಬೇಟೆಯಾಡಿದ ಬೇಟೆಗಾರ ಮತ್ಯಾರು ಅಲ್ಲ ಆ ಲಿಂಗವೆಂಬ ಅರಿವು ಮೂಡಲು ಅಂಗಲಿಂಗ ಸಮರಸಗೊಂಡು ಅಲ್ಲಿ ಅಂಗವೆ ಇಲ್ಲವಾಗಿ ಕೇವಲ ಲಿಂಗವೆಂಬುದೊಂದೆ ಉಳಿಯಲು ಅಲ್ಲಿ ಅಂಗವು ಬಯಲುರೂಪಗೊಂಡು ನಿರವಯವಾಗಿತ್ತು. ಇದನ್ನು ಸಾಧಿಸಿದ ಜಕ್ಕಣಯ್ಯ ಶರಣರಿಗೆ ವಿಚಿತ್ರವೆಂಬಂತೆ ಕಂಡಿದೆ. ಇದರಿಂದ ನಾವುಗಳು ತಿಳಿದುಕೊಳ್ಳಬೇಕಾದ ಮುಖ್ಯ ಅಂಶವೆಂದರೆ ನಾವು ಕೂಡ ಮನಸ್ಸು ಮಾಡಿ ಶಿವಯೋಗ ಸಾಧಿಸಿದರೆ ಜಕ್ಕಣಯ್ಯ ಶರಣರ ರೀತಿಯಲ್ಲಿ ವಿಚಿತ್ರ ಆಶ್ಚರ್ಯವು ಕಾಣಬಹುದು. ಸದ್ಗತಿ ಹೊಂದಲು ಕಾಡು ನಾಡು ಅವರಿವರು ಬೇಕೆಂಬುದಿಲ್ಲ ಇಲ್ಲಿ, ನಾವು ಮನಸ್ಸು ಮಾಡಬೇಕು ಅಷ್ಟೆ. ನಮ್ಮೆಲ್ಲಾ ಬದುಕಿಗೆ ಮನಸ್ಸೆ ಕಾರಣವೆಂಬುದು ಯಾರು ಮರೆಯಬಾರದು. ಮಂಗನಂತಿರುವ ಮನವನ್ನು ಮಹಾಲಿಂಗವನ್ನಾಗಿ ಮಾಡುವುದು ನಮ್ಮ ಕೈಯ್ಯಲ್ಲಿದೆ.
ಬಸವಬೆಳಗಿನ ಶರಣು ಶರಣಾರ್ಥಿ.
No comments:
Post a Comment